ಮುದಗಲ್ ಧ್ವಜಾರೋಹಣ ಸಂದರ್ಭದಲ್ಲಿ ರಾಷ್ಟ್ರಗೀತೆ ಹಾಡದ ನಿರ್ಲಕ್ಷ್ಯ

ಹನುಮಂತ ನಾಯಕ ಸಂಪಾದಕ. 9739109997
ಮುದಗಲ್: ಗಣರಾಜ್ಯೋತ್ಸವ
ದಂದು ರಾಷ್ಟ್ರಧ್ವಜಾರೋಹಣ ಕಾರ್ಯಕ್ರಮದಲ್ಲಿ ರಾಷ್ಟ್ರಗೀತೆ ಹಾಡದೆ ತಟಸ್ಥವಾಗಿ ನಿಂತಿದ್ದ ವಿದ್ಯಾರ್ಥಿಗಳ ನಡೆಗೆ ಸ್ಥಳದಲ್ಲಿದ್ದ ನಾಗರಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಘಟನೆ ಜರುಗಿತು. ಸ್ಥಳೀಯ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಈ ಘಟನೆ ನಡೆದಿದೆ.
ಕಾಲೇಜು ಆವರಣದಲ್ಲಿ ಪ್ರಾಚಾರ್ಯೆ ಸರೋಜಿನಿ ದೇವಿ ಅವರು ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರಧ್ವಜಾರೋಹಣವನ್ನು ನೆರವೇರಿಸಿದರು. ಧ್ವಜಾರೋಹಣದ ಬಳಿಕ ಕೆಲವು ನಿಮಿಷಗಳು ಕಳೆದರೂ ಕೂಡ ವಿದ್ಯಾರ್ಥಿಗಳು ರಾಷ್ಟ್ರಗೀತೆ ಹಾಡದೆ ನಿಂತಿರುವುದು ಗಮನಕ್ಕೆ ಬಂದಿತು. ಇದರಿಂದ ಸ್ಥಳದಲ್ಲಿದ್ದ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿ ನಂತರ ಕೆಲ ನಾಗರಿಕರು ರಾಷ್ಟ್ರಗೀತೆ ಹಾಡುವಂತೆ ವಿದ್ಯಾರ್ಥಿಗಳಿಗೆ ಗದರಿಸಿದ ಬಳಿಕ ಮಾತ್ರ ವಿದ್ಯಾರ್ಥಿಗಳಿಂದ ಗುನುಗುವ ರೀತಿಯಲ್ಲಿ ರಾಷ್ಟ್ರಗೀತೆ ಕೇಳಿಬಂದಿತು. ಈ ನಡೆ ರಾಷ್ಟ್ರಭಕ್ತಿಯ ಕೊರತೆಯನ್ನು ತೋರಿಸುತ್ತದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಕಾರ್ಯಕ್ರಮದಲ್ಲಿ ಸಂವಿಧಾನದ ಪೀಠಿಕೆ ಬೋಧನೆ ಮಾಡದೇ ಇರುವುದೂ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಯಿತು. ರಾಷ್ಟ್ರಪ್ರೇಮ ಹಾಗೂ ಸಂವಿಧಾನ ಮೌಲ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಸೂಕ್ತ ಅರಿವು ಮೂಡಿಸುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳ ಮೇಲಿದೆ. ಆದರೆ ಈ ಕಾರ್ಯಕ್ರಮದಲ್ಲಿ ಪ್ರಾಚಾರ್ಯರ ನಿರ್ಲಕ್ಷ್ಯದ ನಡೆ ಕಂಡುಬಂದಿದೆ ಎಂದು ನಾಗರಿಕರು ಆರೋಪಿಸಿದರು.
ಈ ಘಟನೆ ಸ್ಥಳೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ರಾಷ್ಟ್ರೀಯ ಕಾರ್ಯಕ್ರಮಗಳನ್ನು ಗಂಭೀರವಾಗಿ ಹಾಗೂ ಸಂವಿಧಾನಾತ್ಮಕ ಮೌಲ್ಯಗಳಿಗೆ ಗೌರವ ನೀಡುವ ರೀತಿಯಲ್ಲಿ ನಡೆಸಬೇಕೆಂಬ ಒತ್ತಾಯ ವ್ಯಕ್ತವಾಗಿದೆ.



